21 November 2014

ಚಕ್ರೇಶ್ವರನ ಸಿಂಹಾವಲೋಕನ

(ಚಕ್ರೇಶ್ವರ ಪರೀಕ್ಷಿತ – ೫)

ಕೊಂಕಣ ಸುತ್ತಿ ಮೈಲಾರ:
ಜೋಡುಮಾರ್ಗದ ಗೆಳೆಯ ಸುಂದರರಾವ್ ಮತ್ತು ರಮಾ ದಂಪತಿಗೆ ಒಂದು ಚಾ ದಂಡ ಹಾಕೋಣವೆಂದು ಅಂದು ಮಧ್ಯಾಹ್ನ ಎರಡೂವರೆಗೆ ಸೈಕಲ್ಲೇರಿ ಹೊರಟೆ. ಬರಿದೇ ಹೆದ್ದಾರಿಯಲ್ಲಿ ಬಂಟ್ವಾಳ ಜೋಡು ರಸ್ತೆಗೆ (ಬಿ.ಸಿ ರೋಡು) ಹಿಂದೊಮ್ಮೆ ಹೋಗಿ ಬಂದಿದ್ದೆ. ಹೊಸತನಕ್ಕಾಗಿ ಹೊಸ ದಿಕ್ಕು - ನಂತೂರು, ಕುಲಶೇಖರ, ನೀರ್ಮಾರ್ಗ ದಾರಿ ಅನುಸರಿಸಿದೆ. ಜಿಲ್ಲೆಯೊಳಗೆ ಸಾಮಾನ್ಯವಾಗಿ ನದಿಪಾತ್ರೆಯನ್ನನುಸರಿಸುವ ಅಥವಾ ಕಡಲ ಕಿನಾರೆ ಸಾಮೀಪ್ಯದ ದಾರಿಗಳು ಮಾತ್ರ ತುಸು ಸಮಾಧಾನದಲ್ಲಿರುತ್ತವೆ. ಉಳಿದವು ಹೆಚ್ಚಾಗಿ ಗುಡ್ಡೆಗಳ ಏಣು ಬಳಸಿ, ತಗ್ಗು ಸುಳಿಸಿ ಅಂಕಾಡೊಂಕು ಮತ್ತು ಒಮ್ಮೆ `ಸ್ವರ್ಗ’ದ ಎತ್ತರಕ್ಕೇರಿಸುತ್ತವೆ, ಮರುಕ್ಷಣಕ್ಕೆ `ಪಾತಾಳ’ದ ಆಳಕ್ಕೇ ತಳ್ಳುತ್ತವೆ.ನೀರ್ಮಾರ್ಗದ ಕಥೆ ಇದೇ. ಸೈಕಲ್ ಇಳಿಯುವ ರಭಸವನ್ನು ಏರುವ ಶ್ರಮಕ್ಕೆ ಪರಿವರ್ತಿಸಲಾಗಿದ್ದರೆ ಎಂದು ಕೊರಗುವಂತೆ ಹೊಸ ಏರು ಎದುರಾಗುತ್ತಿತ್ತು. ಇಳಿಜಾರಿನ ಸುಳಿದಾಟಗಳಲ್ಲಿ ರಸ್ತೆಯ ಎಡ ಅಂಚು ಕಾಯ್ದುಕೊಳ್ಳುವುದು ಸುಲಭ. ಅದೇ ಏರು ದಾರಿಯಲ್ಲಿ ಸೈಕಲ್ಲಿಗೆ ಯಾವುದೇ ಮಗ್ಗುಲಿನ ಒಳ ಅಂಚು ಕಠಿಣವಾಗುತ್ತದೆ. ನಾವು ಮೋಟಾರ್ ವಾಹನಗಳಲ್ಲಿದ್ದರೆ ಮೂಲತಃ ನಮ್ಮದೇ ಸದ್ದಿನಿಂದ ದಾರಿಯ ಕಾಣಿಸದ ಹಿಂದುಮುಂದಿನ ವಾಹನಗಳ ಬರ-ಹೋಗುವ ಸೂಚನೆಗಳು ತಿಳಿಯದೇ ಹೋಗಬಹುದು. ಆದರೆ ಸುಸ್ಥಿಯ ಸೈಕಲ್ ನಡಿಗೆಗಿಂತಲೂ ಮೌನಿ. ರಸ್ತೆಯ ಯಾವುದೇ ಅಂಚನ್ನು ನಿಷ್ಠೆಯಿಂದ ಕಾಯ್ದುಕೊಳ್ಳುವ ಸೈಕಲ್ಲನ್ನು ಇತರ ವಾಹನಗಳು ಪಾದಚಾರಿಗಳ ವರ್ಗದಲ್ಲೇ ಕಾಣುವುದರಿಂದ ಆತಂಕಿತರಾಗುವುದಿಲ್ಲ ಮತ್ತು ರಿಯಾಯಿತಿಯನ್ನೂ ಕೊಡುತ್ತಾರೆ. (ಪೇಟೆಯೊಳಗೇ ಗಮನಿಸಿ: ಕೆಂಪು ಸಂಕೇತ, `ನೋ ಎಂಟ್ರಿ’, ಏಕಮುಖಸಂಚಾರಗಳಲ್ಲೆಲ್ಲ ಪೋಲಿಸರು ಸೈಕಲ್ಲನ್ನು ವಿಚಾರಿಸುವುದೇ ಇಲ್ಲ!) ನಾನಿದನ್ನು ಗಮನದಲ್ಲಿಟ್ಟುಕೊಂಡು ಕಠಿಣವಾದ ಎಡ ತಿರುವುಗಳಲ್ಲೆಲ್ಲ ಎಚ್ಚರಿಕೆ ಎಚ್ಚರಿಕೆಯಿಂದ ಬಲ ಮಗ್ಗುಲುಗಳನ್ನೇ ಬಳಸಿಕೊಂಡೆ.

18 November 2014

ದುಃಖದ ಒಂದು ಘಟನೆ

ಅಧ್ಯಾ ಮೂವತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಮೂವತ್ತೆರಡನೇ ಕಂತು
ನಾನು ಯಾರ್ಮತ್ತಿಗೆ ಸಾಯಂಕಾಲ ತಲುಪಿದೆನು. ಮಿ. ಬಾರ್ಕಿಸರ ಮನೆಗೆ ಹೋಗುವ ದಾರಿಯಲ್ಲೇ ಓಮರ್ ಮತ್ತು ಜೋರಾಮರ ಅಂಗಡಿಯಿದ್ದುದರಿಂದ ಮಿ. ಓಮರರೊಡನೆ ಸ್ವಲ್ಪ ಮಾತಾಡಿ ಹೋಗೋಣವೆಂದು ನಾನು ಅವರ ಅಂಗಡಿಗೆ ಹೋದೆನು. ಮಿ. ಓಮರರು ಅವರ ಆರಾಮ ಕುರ್ಚಿಯಲ್ಲಿ ಕುಳಿತು ಸಿಗರೇಟ್ ಸೇದುತ್ತಿದ್ದರು. ಅವರ ಖಾಸಶ್ವಾಸದ ನಿಮಿತ್ತ ಅವರು ಹೆಚ್ಚಾಗಿ ಆರಾಮ ಕುರ್ಚಿಯಲ್ಲೇ ಕುಳಿತಿರುತ್ತಿದ್ದರೆಂದು ತಿಳಿದೆ. ನನ್ನನ್ನು ಕಂಡು ಅವರಿಗೆ ಬಹಳ ಸಂತೋಷವಾಯಿತು. ನನಗೆ ಆಸನ ಕೊಟ್ಟರು. ಉಭಯ ಕುಶಲ ಪ್ರಶ್ನೆಗಳನ್ನಾಡಿದೆವು. ಅನಂತರ ನಾನು ವಿಚಾರಿಸಿದೆ –
“ಮಿ. ಬಾರ್ಕಿಸರ ಖಾಯಿಲೆ ಯಾವ ಸ್ಥಿತಿಯಲ್ಲಿದೆಯೆಂದು ನಿಮಗೇನಾದರೂ ಗೊತ್ತಿದೆಯೇ ಮಿ. ಓಮರ್?”
“ಆ ಪ್ರಶ್ನೆಯನ್ನು ನಾನೇ ಕೇಳಬೇಕೆಂದಿದ್ದೆ, ಮಿ. ಕಾಪರ್ಫೀಲ್ಡ್” ಎಂದು ಹೇಳುತ್ತಾ ನಗಾಡಿದರು. ನಗೆಯಿಂದ ನೇವಸ, ಉಬ್ಬುಸ ತಲೆದೋರಿ, ಸ್ವಲ್ಪ ಸಮಾಧಾನವಾಗುವುದರೊಳಗೆ, ಉತ್ಸಾಹದಿಂದಲೇ ಮಾತಾಡಲಾರಂಭಿಸಿದರು –
“ನಮ್ಮ ಶವಸಂಸ್ಕಾರ ಸಾಹಿತ್ಯದಂಗಡಿಗಳಿಗೆ ಇರುವ ಒಂದು ವಿಶೇಷ ಅವಗುಣವೆಂದರೆ, ಅಂಗಡಿ ಮಾಲೀಕರಿಗೆ ಇತರರ ಖಾಯಿಲ ಹೇಗಿದೆ, ಅವರ ಆರೋಗ್ಯ ಹೇಗಿದೆ ಎಂದು ಕೆಲವು ಸಂದರ್ಭಗಳಲ್ಲಿ ಕೇಳಲು ಅನುಕೂಲವಿಲ್ಲದಿರುವುದು! ನೋಡಿ, `ಓಮರ್ ಮತ್ತು ಜೋರಾಮರ ನಮಸ್ಕಾರ’ ಎಂದು ಕೇವಲ ಸಾಂಪ್ರದಾಯಿಕವಾಗಿ ಪತ್ರ ಬರೆದರೂ ಜನರ ಮುಖಾಂತರ ವಿಚಾರಿಸಿದರೂ ಖಾಯಿಲಸ್ಥರಿರುವ ಮನೆಯವರು ಅಪಾರ್ಥವನ್ನೇ ಕಲ್ಪಿಸಿಕೊಳ್ಳುವರು.” ಇಷ್ಟು ಹೇಳುವಾಗಲೇ ಪುನಃ ಕೆಮ್ಮು ಬಂತು. ಸ್ವಲ್ಪ ಕಷ್ಟಪಟ್ಟರು, ಅಂತೂ ಬಿಡದೆ ಪುನಃ –
“ಮಿ. ಬಾರ್ಕಿಸರನ್ನು ಕುರಿತು ವರ್ತಮಾನ ಸಂಗ್ರಹಿಸಲು ಅನುಕೂಲವಿದೆ – ಸ್ವಲ್ಪ ತಡೆಯಿರಿ, ಎಮಿಲಿ ಅಲ್ಲಿಗೆ ಹೋದವಳು ಸದ್ಯ ಬರಬಹುದು” ಎಂದೆಂದರು.

14 November 2014

ಕಯಾಕ್ ಬಂತು! ಪೂರ್ವರಂಗದ ಕಸರತ್ತುಗಳು

“ಕೇಳ್ರಪ್ಪೋ ಕೇಳಿ! ಒಂಟಿ ದೋಣಿ, ಕತ್ತಿ ದೋಣಿ, ಜೋಡು ದೋಣಿ, ಸ್ಟೀಮರ್ ಲಾಂಚ್, ಜೆಟ್ ಬೋಟ್, ಉಗಿ ಹಡಗು, ಹಾರುವ ದೋಣಿ ತಯಾರಿಯಲ್ಲಿ ನಾನು ಪರಿಣತನಿದ್ದೇನೆ, (ಕುರುಕ್ಷೇತ್ರದ ಧರ್ಮರಾಯನ ಇಳಿಧ್ವನಿಯಲ್ಲಿ) ಕಾಗದ ಮಡಚುವುದರಲ್ಲಿ!” ಆದರೆ ಇಲ್ಲಿ ಪರಿಸ್ಥಿತಿ ಮಕ್ಕಳಾಟದ್ದಲ್ಲ, ವಾಸ್ತವದೊಡನೆ ಮುಖಾಮುಖಿಯದು. ನಮ್ಮದೇ ದೋಣಿ ಬರುತ್ತಾ ಇದೆ. ಕೊಚಿನ್ನಿನ `ಸಮುದ್ರ ಶಿಪ್ಪಿಂಗ್ ಯಾರ್ಡ್ ಪ್ರೈ. ಲಿ’., ಸಂಸ್ಥೆಯ ಸೋದರರಿಗೆ ಬಹುವಿಧದ ದೋಣಿ ತಯಾರಿಯಲ್ಲಿ ಮೈಪೂರಾ ಕೆಲಸ. ಭಾರತವೇನು ಹಲವು ವಿದೇಶೀ ಸಂಸ್ಥೆಗಳೂ ಇವರ ಖಾಯಂ ಗಿರಾಕಿಗಳು. ಆದರೂ ಮಙ್ಗಳಾಪುರದಿಂದ ಶುದ್ಧ ವೈಯಕ್ತಿಕ ದೋಣಿಚಾಲನೆಯ ಸಂತೋಷಕ್ಕೆ ತಮ್ಮ ಕಯಾಕ್ ಕೊಳ್ಳಲು ಬಂದರಲ್ಲಾಂತ ಭಾರೀ ಕುಶಿ. ನಮ್ಮ ಉತ್ಸಾಹ ಕಂಡು, ಪ್ರತ್ಯೇಕ ಹವಾನಿಯಂತ್ರಿತ ಕೋಣೆಯಲ್ಲಿದ್ದ ಎಂ.ಡಿ., (ಹಿರಿಯಣ್ಣ-ಸುಧಾಕರನ್) ತಯಾರಿ ಘಟಕ ವರಿಷ್ಠ (ಎರಡನೇ ಸೋದರ) ಹಾಗೂ  ಮಾರಾಟ ವಿಭಾಗದ ಮುಖ್ಯಸ್ಥರೆಲ್ಲ (ಮೂರನೆಯವ - ಮುರಳೀಧರನ್) ಕೈಯಲ್ಲಿದ್ದ ಕೆಲಸ ಬಿಟ್ಟು ಬಂದು, ಮಾತಾಡಿಸಿದರು. ಕೊನೆಯಲ್ಲಿ ಕೆಲವು ರಿಯಾಯಿತಿಗಳನ್ನೂ ಕೊಟ್ಟು, ಒಂದೇ ವಾರದಲ್ಲಿ ನಮ್ಮ ಅಗತ್ಯ ಪೂರೈಸುವುದಾಗಿ ಭರವಸೆ ಕೊಟ್ಟರು. ಕುಶಿಯಲ್ಲೇ ಮುಂಗಡ ಕೊಟ್ಟು ಮರಳಿದ್ದೇನೋ ಸರಿ. ಈಗ ವಾರ - ಹತ್ತು ದಿನಗಳಲ್ಲಿ ಲಾರಿಯೇರಿ ಬರುವ ದೋಣಿಯನ್ನು ಮನೆ ತುಂಬಿಕೊಳ್ಳುವುದು ಹೇಗೆ ಎಂಬಲ್ಲಿಂದಲೇ ಕೆಲಸಗಳು ಶುರುವಾದವು. ದೋಣಿ ಹೊರಲು ನನ್ನ ವ್ಯಾಗನರ್ ಕಾರಿಗೆ ತಲೆಗೊಂದು ಬಲವಾದ ಕಿರೀಟ ತೊಡಿಸಿದೆ. ಬಿಗಿದು ಕಟ್ಟಲು ಹಳತಾದ ನನ್ನ ಪರ್ವತಾರೋಹಣದ ನೂರಡಿ ಹಗ್ಗವನ್ನೇ ಸಜ್ಜುಗೊಳಿಸಿಟ್ಟುಕೊಂಡೆ. ಮನೆಯಲ್ಲಿ ಕಾರು ಶೆಡ್ಡಿನ ತಾರಸಿಯಿಂದ ಎರಡು ಹಗ್ಗದ ಬಳೆ ಇಳಿಸಿ, ಬಳಕೆಯಿಲ್ಲದಾಗ ದೋಣಿ ವಿರಮಿಸಲು ವ್ಯವಸ್ಥೆ ಮಾಡಿದೆ; ಕನಸಿನ ಕೂಸಿಗೆ ತೊಟ್ಟಿಲು ಕಟ್ಟಿದ್ದೆ! ಇನ್ನು ಸವಾರಿ ಎಲ್ಲಿಂದ ಶುರು? ತರಬೇತಿ? ರಕ್ಷಣೆ??

11 November 2014

ನಾನು ಸ್ಟೀಯರ್ಫೋರ್ತನ ಮನೆಗೆ ಪುನಃ ಹೋದುದು

ಅಧ್ಯಾ ಇಪ್ಪತ್ತೊಂಬತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಮೂವತ್ತೊಂದನೇ ಕಂತು
ಸ್ಟೀಯರ್ಫೋರ್ತನ ಮನೆಗೆ ಹೋಗಲು ಮತ್ತು ಅಲ್ಲಿಂದ ಯಾರ್ಮತ್ತಿಗೆ ಹೋಗಲು ಸಹ, ಒಂದೆರಡು ದಿನ ರಜೆ ಪಡೆದುಕೊಂಡೆನು. ಸ್ಪೆನ್ಲೋ ಮತ್ತು ಜಾರ್ಕಿನ್ಸ್ ಒಕ್ಕೂಟದಲ್ಲಿ ನನಗೆ ಸಂಬಳವೆಂದು ಹಣ ಸಲ್ಲತಕ್ಕದ್ದಿಲ್ಲದಿದ್ದುದರಿಂದ ರಜೆ ಸುಲಭವಾಗಿ ಸಿಕ್ಕಿತು. ರಜ ಕೇಳಲು ಮಿ. ಸ್ಪೆನ್ಲೋರವರ ಸಮಕ್ಷಮಕ್ಕೆ ಹೋಗಿದ್ದಾಗ ಮಿಸ್ ಸ್ಪೆನ್ಲೋಳು ಕ್ಷೇಮದಲ್ಲಿದ್ದಾಳೆಯೇ ಎಂದು ವಿಚಾರಿಸಿದೆನು. ಹಾಗೆ ವಿಚಾರಿಸುವಾಗಲೇ ನನ್ನ ಗಂಟಲು ಕಟ್ಟತೊಡಗಿತು. ಮತ್ತು ಕಣ್ಣು ದೃಷ್ಟಿ ಮಸುಕಾಗತೊಡಗಿತ್ತು. ಆದರೆ ನನ್ನ ಮನಸ್ಸಿನ ಪರಿಸ್ಥಿತಿ ಹಾಗಿದ್ದರೂ ಮಿ. ಸ್ಪೆನ್ಲೋರವರು ನಾನು ಯಾರೋ ಒಬ್ಬ ಅಗಣ್ಯ ವ್ಯಕ್ತಿಯನ್ನು ಕುರಿತು ಕೇವಲ ಸಾಂಪ್ರದಾಯಿಕವಾಗಿ ವಿಚಾರಿಸಿದವನೆಂಬಂತೆ ಗ್ರಹಿಸಿ, ಅವಳು ಕ್ಷೇಮವಾಗಿದ್ದಾಳೆಂದು ತಿಳಿಸಿದರು.

07 November 2014

ಕಾಲಚಕ್ರದಲ್ಲಿ ಮತ್ತಷ್ಟು ಸುತ್ತುಗಳು


(ಚಕ್ರೇಶ್ವರ ಪರೀಕ್ಷಿತ – ೪)
ಕೆತ್ತಿ ಹೋದ ಕಲ್ಲು: ಹೆಸರು ಅಮೃತ ನಗರ, ಆಚೆ ಕೊನೆಯಲ್ಲಿ ಮೃತ ನಗರ ಕ್ಷಮಿಸಿ, ಮಾತಿನ ಅಲಂಕಾರಕ್ಕೆ ಹೇಳುತ್ತಿಲ್ಲ. ಮೂಡಬಿದ್ರೆ ದಾರಿಯಲ್ಲಿ ಕುಖ್ಯಾತವೇ ಆದ ಕೆತ್ತಿಕಲ್ಲಿನ ನೆತ್ತಿಯಲ್ಲಿ ಪುಟ್ಟ ವಸತಿ ವಠಾರದಲ್ಲಿ ನಿನ್ನೆ ಸಂಜೆ ನನ್ನ ಸೈಕಲ್ ಸರ್ಕೀಟು ಕಂಡ ಮನಕಲಕಿದ ವಾಸ್ತವವಿದು.


ಸೈಕಲ್ಲೇರಿ ಅದೇ ಕುಲಶೇಖರ, ಕುಡುಪು, ವಾಮಂಜೂರು ದಾರಿಗಾಗಿ ಗುರುಪುರಕ್ಕೆಂದೇ ಹೊರಟಿದ್ದೆ. ಪಿಲಿಕುಳ ಕವಲು ಎಡಕ್ಕೇ ಬಿಟ್ಟು ಮುಂದುವರಿದಂತೆ ಪಿರಿಪಿರಿ ಮಳೆ ಹಿಡಿದುಕೊಂಡಿತು. ಮೊನ್ನೆ ಹೀಗೇ ನಂತೂರು, ಕಾವೂರು, ಕೂಳೂರು ನೆನೆದುಕೊಂಡೇ ಹೋಗಿದ್ದೆ. ಕೆಲವರು ಮಳೆ ಕಂಡಾಗ ಹೌಹಾರುವ ಕ್ರಮ ನೋಡಿದಾಗ ಗೆಳೆಯ ವೆಂಕಟ್ರಮಣ ಉಪಾಧ್ಯರ ಮಾತು “ಅದ್ ನೀರು, ಸುಡೂಕ್ ಬೆಂಕಿಯಲ್ಲ ಕಾಣಿ” ನೆನಪಾಗುತ್ತದೆ. ಬಚ್ಚಲುಮನೆಯಲ್ಲಿ ಗಂಟೆಗಟ್ಟಳೆ ಶಿಖನಖಾಂತ “ಗೋವಿಂದಾನೆ ಗೋವಿಂದ” ಮಾಡುವಾಗ ಬಾರದ ಶೀತಜ್ವರ ಮಳೆಯಲ್ಲಿ ನೆಂದರೆ ಬರುತ್ತದೆಂಬರ ಭ್ರಮೆ ನನಗಿಲ್ಲ. ಆದರೆ ಇಂದು ಹಾಗಲ್ಲ. ನನಗೊಂದು ಲಕ್ಷ್ಯವಿತ್ತು; ಗುರುಪುರ ಸೇತುವೆಯ ಚಿತ್ರ-ದಾಖಲೆ. ಜಡಿಮಳೆ ಹಿಡಿದರೆ ಪ್ಲ್ಯಾಸ್ಟಿಕ್ ಕಳಚಿ ಕ್ಯಾಮರಾ ತೆಗೆಯುವುದಸಾಧ್ಯ. ಬದಲಿಗೆ ಇದು ನೋಡುವಾಂತ ಒಮ್ಮೆಲೇ ಎಡ ದಾರಿಗೆ ನುಗ್ಗಿದೆ ಬೋರ್ಡು ಹೇಳಿತು - ಅಮೃತ ನಗರ.

ಕೆಲವು ವರ್ಷಗಳ ಹಿಂದೆ ಒಮ್ಮೆಲೆ ಕೆತ್ತಿಕಲ್ಲು ರಾಷ್ಠ್ರವ್ಯಾಪೀ ಸುದ್ದಿ ಮಾಡಿತ್ತು. ಕರಾವಳಿ ವಲಯದ ಎಲ್ಲ ಪದವುಗಳಂತೆ ಈ ವಾಮಂಜೂರು ಪದವೂ ವಿಸ್ತಾರವಾಗಿ ಕರಿಗಟ್ಟಿದ್ದ ಮುರಕಲ್ಲಿನದೇ ಹರಹು. ವಸತಿ ಒತ್ತಡದಲ್ಲಿ ನಾಗರಿಕತೆ ಇಲ್ಲೂ ಪದವಿನ ಪೂರ್ವ ಅಂಚಿನವರೆಗೆ ದೃಢ ನೆಲ ನಂಬಿ ಸೈಟು, ಮನೆಯೆಂದು ಹರಡಿಕೊಂಡಿತ್ತು. ಆ ಮಳೆಗಾಲದಲ್ಲಿ ಒಮ್ಮೆಗೇ ಗುಡ್ಡೆ ನೆತ್ತಿಯಿಂದ ನೂರಿನ್ನೂರು ಅಡಿ ಕೆಳಗಿನವರೆಗೂ ಅಂದರೆ, ಕೆತ್ತಿಕಲ್ಲು ವಲಯದಲ್ಲಿ ಹಾದು ಹೋಗುವ ಮೂಡಬಿದ್ರೆ ದಾರಿಯೂ ಸೇರಿದಂತೆ ಸರಿ ಸುಮಾರು ಅರ್ಧ ಗುಡ್ಡೆಯೇ ಪೂರ್ವ ದಿಕ್ಕಿಗೆ ಕುಸಿಯತೊಡಗಿತ್ತು. ಟನ್‍ಗಟ್ಟಲೆ ತೂಕದ ಕಲ್ಲ ಹೋಳುಗಳು, ಮಣ್ಣು, ಕುರುಚಲು ಕಾಡು, ಮನೆ, ದಾರಿ ಎಲ್ಲವೂ ಗುರುಪುರ ನದಿಯ ಕಣಿವೆಯತ್ತ ಉರುಳಿ, ತೆವಳಿ ಸರಿಯತೊಡಗಿತ್ತು. ಇದರ ಗತಿ ನಿಧಾನಕ್ಕಿದ್ದುದರಿಂದ ಬಹುಶಃ ಮನುಷ್ಯ ಜೀವಹಾನಿಯೇನೂ ಆಗಲಿಲ್ಲ. ಆದರೆ ಅದೆಷ್ಟೋ ಮಂದಿಯ ಜೀವನಹಾನಿ, ಮೂಡಬಿದ್ರೆಯ ಬಹುದೊಡ್ಡ ಸಂಪರ್ಕ ಮಾರ್ಗನಾಶ ಉಪೇಕ್ಷಿಸುವ ಹಾಗಿರಲಿಲ್ಲ. ಪ್ರಜಾಪ್ರತಿನಿಧಿಗಳು, ದೇಶಾದ್ಯಂತ ಪರಿಣತರು ಬಂದರು, ಹೋದರು. ನೂರು ಸಾವಿರ ಊಹೆ, ಸಲಹೆ, ಆಶ್ವಾಸನೆಗಳು ಹರಿದವು, ಮರೆತರು. ಕೆಲವು ಕಾಲ ಕಳೆದು ಗಟ್ಟಿಯಾಗಿ ಆದದ್ದು ಒಂದೇ – ಅಲೆಯಲೆಯಾಗಿಯಾದರೂ ಮೂಡಬಿದ್ರೆ ಸಂಪರ್ಕ ರಸ್ತೆಯ ಪುನಃ ಸ್ಥಾಪನೆ. ಪ್ರಕೃತಿ ಸಹಜ ಕ್ರಿಯೆಯಲ್ಲಿ ತನ್ನ ದೊಡ್ಡ ಗಾಯ ಗೊಂದಲಗಳನ್ನು ಮಳೆಯಲ್ಲಿ ತೊಳೆದು, ಕುರುಚಲು ಹಸಿರಿನ ಪಟ್ಟಿ ಎಳೆದು ಮರೆಸಿತು. ಮುಂದಿನ ವರ್ಷಗಳ ಮಳೆಗಾಲಗಳಲ್ಲಿ ನೆತ್ತಿಯಿಂದ ವಿಶೇಷ ಕುಸಿತ ಆಗದಿದ್ದರೂ ಆ ವಲಯದ ಅಸ್ಥಿರತೆ ಇಂದಿಗೂ ಮುಂದುವರಿದಿದೆ. (ಈ ವರ್ಷದ ಕುಸಿತ ಗಮನಿಸಿ) ಪಿಲಿಕುಳದ ಸರೋವರದ ಭಾರದಿಂದ ಆಂತರ್ಯದ ಸೇಡಿಮಣ್ಣು ಕುಸಿದು, ತೊಳೆದು ಹೋಗುವಾಗ ಕುಸಿತ ಸಹಜ ಎನ್ನುವ ದೊಡ್ಡ ಊಹಾವರದಿ ಬಿಟ್ಟರೆ ಸ್ಪಷ್ಟ ಕಾರಣ, ಅದಕ್ಕೆ ಮದ್ದು, ಎಲ್ಲಕ್ಕೂ ಮುಖ್ಯವಾಗಿ ಸೊತ್ತು ಹಾನಿಯಾದವರಿಗೆ ವ್ಯವಸ್ಥೆ ಏನೇನೂ ಆದಂತಿಲ್ಲ.